Friday, 7 September 2012

ಅಂತರಂಗದ ಅಳಲು

ನಾನೇಕೋ ಜೀವನದಲ್ಲಿ ಸಣ್ಣಪುಟ್ಟ ಸಂತೋಷಗಳನ್ನು ಕಳೆದು ಕೊಳ್ಳುತ್ತಿದ್ದೇನ ಎಂಬ ನೋವು ಕಾಡುತ್ತಿದೆ.


ಬಾಲ್ಯದಲ್ಲಿ ಪಕ್ಕದ ಮನೆಯ ದೋಬಿಯ ಬಟ್ಟೆ ಒಗಯುವ ಟ್ಯಾಂಕ್ ನಲ್ಲಿ ಪಟಾಕಿ ಸಿಡಿಸಿದಾಗ ಸಿಗುತ್ತಿದ್ದ ಖುಶಿ,

ಭಾಷಣ ಸ್ಪರ್ಧೆಯಲ್ಲಿ ಬಹುಮಾನ ಸಿಕ್ಕಾಗ ಆಗುತ್ತಿದ್ದ ಸಂತಸ, ಅಜ್ಜ ಚಾಕೊಲೇಟ್ ತಂದು ಕಟ್ಟಾಗ ಸಿಗುತ್ತಿದ್ದ ಆನಂದ ಎಲ್ಲಿ ಕಳೆದು ಹೋಯಿತು? ನವರಾತ್ರಿಯ ದಿನ ಹುಲಿವೇಷ ಕುಣಿದು ಸಿಕ್ಕ ಚಿಲ್ಲರೆ ದುಡ್ಡಿನಲ್ಲಿ ಹೋಟೆಲಿನಲ್ಲಿ ದೋಸೆ ತಿನ್ನುತ್ತಿದ್ದಾಗ ಆಗುತ್ತಿದ್ದ ಸಂತೋಷ ಏನಾಯಿತು?

ಬೆಂಗಳೂರಿಗೆ ಬಂದ ಹೊಸತರಲ್ಲಿ ಇದ್ದ ಸಣ್ಣಪುಟ್ಟ ಕನಸುಗಳು, ಚಿಕ್ಕ ಪುಟ್ಟ ಬಯಕಗಳು, ಅದಕ್ಕೋಸ್ಕರ ಮಾಡುತ್ತಿದ್ದ ಪ್ಲಾನ್ ಗಳಲ್ಲಿ ಕಾಣುತ್ತಿದ್ದ ನೆಮ್ಮದಿ ಎಲ್ಲಿ ಕಣ್ಮರೆಯಾಯಿತು?
ವಿದ್ಯಾರ್ಥಿ ಭವನದ ಮಸಾಲ ದೋಸೆ ರುಚಿ ನೆನೆಸಿದಾಗಲೆಲ್ಲ ನಾಲಿಗೆಯಲ್ಲಿ ನೀರೂರುತ್ತಿತ್ತು. ಈಗ ಪಂಚತಾರ ಹೋಟೆಲಿನ ವಿವಿದ ಖಾದ್ಯಗಳೇಕೆ ರುಚಿಸುತ್ತಿಲ್ಲ.

ಜೀವನದಲ್ಲಿ ಹಂತ ಹಂತವಾಗಿ ಬೆಳೆಯುತ್ತಿದ್ದಂತೆ, ಕನಸುಗಳು ಸಾಕಾರವಾಗುತ್ತಿದ್ದಂತೆ ಆಸೆಯೆಂಬ ಮರೀಚಿಕೆಯ ಬೆನ್ನು ಹತ್ತುತ್ತೇವೇನೋ?

ದುರಾಸೆಯ ಪ್ರಭಾವ ಜೀವನವನ್ನು ಆವರಿಸಿಕೊಳ್ಳುತ್ತಿದೆಯೇನೋ ಎಂಬ ಭಯ ಕಾಡುತ್ತಿದೆ.

Saturday, 25 August 2012

ಮತ್ತೊಮ್ಮೆ ಬಾ ಶ್ಯಾಮ

ಬಾರದ ಕೃಷ್ಣನಿಗಾಗಿ ಕಾಯುತ್ತಿದ್ದಾಳೆ ರಾಧೆ
ಆತನ ನಿರೀಕ್ಷೆಯಲ್ಲೇ ಕೊರಗಿ ಸೊರಗಿದ್ದಾಳೆ

 ಅವನಿಗೋ ಅರಮನೆಯ ವೈಭೋಗ ಗೋಕುಲದ
ಹಳೆಯ ನೆನಪುಗಳನು ಅಳಿಸಿ ಹಾಕಿದೆ
ಹಾಲು ಮೊಸರ ರಾಶಿ ಕಣ್ಣ ಮುಂದೆ ಇರುವಾಗ
ಕಾಡುವುದೆನಿತು ಗೋಪಿಕಾ ಸ್ತ್ರೀಯರ ಮಣ್ಣಿನ ಕುಡಿಕೆ

ಹನಿ ನೀರು ಸೇರುತ್ತಿಲ್ಲ ಆತ ಕಣ್ಮರೆಯಾದಾಗಿನಿಂದ
ಮನದ ತುಂಬಾ ಕಳೆದ ಮಧುರ ನೆನಪುಗಳ ನೋವು
ಸುಂದರ ನಾಳೆಯಳ ಅನುಭವಿಸೆನುತ್ತಿದೆ ಪ್ರಪಂಚ
ಅವಳಿಗೋ ಅವನೇ ನಿನ್ನೆ ನಾಳೆ ಇಂದು ಎದೆಂದು

Tuesday, 6 December 2011

ಕನಸುಗಳು

ಕನಸುಗಳ ಮಾರುವ ಊರಿಗೆ ಬನ್ನಿ
ಅಲ್ಲಿ ಸಂತೆಯಲ್ಲಿ ಕುಳಿತಿದ್ದಾನೊಬ್ಬ ಸಂತ

ಕೊಳ್ಳುತ್ತಿದ್ದಾರೆಲ್ಲ ಬಣ್ಣಬಣ್ಣದ ಕನಸುಗಳ
ಇವ ಮಾತ್ರ ನಗುತ್ತಿದ್ದಾನೆ ಎಲ್ಲರ ಅವಸರ ನೋಡಿ
ಇಂದಿರುವುದು ನಾಳೆಯಿಲ್ಲ ನಾಳೆಯೆಂಬುದ ಕಂಡವರಿಲ್ಲ
ಆದರೂ ಕನಸುಗಳ ಮಾರಟಕ್ಕೆ ಧಕ್ಕೆ ಇಲ್ಲ

ಒಂದು ದಿನ ಬದುಕು ಬದಲಾಗಿ ಬಂಗಾರವಾಗುತ್ತದೆ
ಈ ಕನಸನ್ನು ಜನ ಹರಾಜಲ್ಲಿ ಕೂಗುತ್ತಿದ್ದಾರೆ
ಒಂದೇ ಬಾರಿ ಆ ಚೆಲುವೆ ನನ್ನವಳಾಗಲೆಂಬ ಕನಸಿಗೆ
ಎಲ್ಲಾ ಪ್ರಾಯದವರು ಸರದಿಯಲ್ಲಿ ಕಾಯುತ್ತಿದ್ದಾರೆ

ಮನಸ್ಸಿನ ಬಾವನೆಗಳ ಮುಚ್ಚಿಟ್ಟುಕೊಂಡು
ಬದುಕುತ್ತಿರುವ ನಮಗೆಲ್ಲಾ ಬದುಕುವ ಭರವಸೆ ಈ
ಕನಸುಗಳು ನನಸಾದರೆ ಕಲ್ಪನೆಗೂ ವಾಸ್ತವಕ್ಕು
ಆಗುವ ತಾಕಲಾಟದ ನೋವು ಯಾರಿಗೆ ಬೇಕು

Wednesday, 20 July 2011

ಬೇಡ ಇನ್ನೊಮ್ಮೆ

ಹೃದಯವೇ ಬೀಳಬೇಡ ಮತ್ತೊಮ್ಮೆ ಪ್ರೀತಿಯ ಬಲೆಯಲಿ
ಡೊಂಕು ನಾಯಿಬಾಲದಂತೆ ಎಂದೆಂದಿಗೂ ನೇರವಾಗದೆ
ಇರಬೇಡ

ಕೈ ಕೈ ಹಿಡಿದು ರಾಜ ರಾಣಿಯರು ನಾವು
ಈ ಲೋಕ ಇರುವುದೇ ನಮಗೆಂದು
ಭ್ರಮೆಯಲ್ಲಿ ಒಮ್ಮೆ ಬಿದ್ದಿದ್ದೆ ಅಂದು
ನೀರ ಗುಳ್ಳೆಯಂತೆ ಕನಸು ಕರಗಿ
ನೀರಿನಿಂದ ಹೊರತೆಗೆದ ಮೀನಿನಂತೆ
ನರಳಿದ್ದಷ್ಟು ಬೇಗ ಮರೆತು ಹೋಯಿತೆ

ಮಾಗಿಯ ಚಳಿಗೆ ಮಾಗಿದ ಮೈ ಮನ
ಬೆರೆತಾಗ ಹಂಚಿಕೊಂಡ ಭರವಸೆಗಳು
ಉಸಿರಿರುವವರೆಗು ಒಂದಾಗಿರುತ್ತೇವೆಂಬ
ಆಶ್ವಾಸನೆಗಳು ಅಷ್ಟುಬೇಗ ಅಳಿಸಿ ಹೋಯಿತೆ
ಚೂರಾದ ಮನಸ್ಸು ತೇಪೆ ಹಾಕಲು ಪಟ್ಟ ಶ್ರಮ
ಸಮಯ ಹರಣ ಮತ್ತೊಮ್ಮೆ ನೆನಪಿಸಿಕೊ

Saturday, 7 May 2011

ನೀ ನಾನಾಗಿದ್ದರೆ

ನೀನು ನಾನಾಗಿದ್ದರೆ ತಿಳಿಯುತ್ತಿತ್ತು ನನ್ನ ಮನದಾಳದ ತಳಮಳ
ನನ್ನ ಕನಸುಗಳೆಲ್ಲಾ ನೀನೇ ತುಂಬಿರುತ್ತಿದ್ದ ಆ ಕಳವಳ

ಹೇಳದೆ ಹೇಳಲಾಗದೆ ಮನಸಿನಲಿ ಉಳಿದ ಮಾತುಗಳೆಷ್ಟೋ
ಕಣ್ಣಂಚಿನಲಿ ಜಾರದಂತೆ ತಡೆದಿಟ್ಟ ಕಂಬನಿ ಹನಿಗಳೆಷ್ಟೋ
ನಿನ್ನ ನೆನಪಲೆ ಕಳೆದುಕೊಂಡ ಸವಿಘಳಿಗೆಗಳೆಷ್ಟೋ
ಒಂದು ನಿಮಿಷ ಮರೆಯಾದರೆ ನೀನು ನರಳಿದ ಕ್ಷಣಗಳೆಷ್ಟೋ

ಹೆಗಲಿಗೊರಗಿ ಸುಖನಿದ್ದೆಯಲಿ ನೀ ಕಳೆದು ಹೋಗುತ್ತಿದ್ದೆ
ಈ ಪ್ರೀತಿ ಕೊನೆ ತನಕವೆಂಬ ಭ್ರಮೆಯಲ್ಲಿ ನಾನಿರುತ್ತಿದ್ದೆ
ನೀ ಕಚ್ಚಿ ಕೊಟ್ಟ ಮಿಡಿ ಮಾವಿನ ಅಮೃತ ಸವಿಯ ಸ್ವರ್ಗ
ನೀ ಕಾರಣ ಕೊಡದೆ ತೊರೆದ ಹೋದ ನೋವಿನ ನರಕ

Thursday, 14 April 2011

ನನ್ನ ತಂಗಿಯ ಮೊದಲನೇ ಪುಸ್ತಕ ಬಿಡುಗಡೆ



ಆತ್ಮೀಯರೇ
ನನ್ನ ಕಣ್ಣೆದುರೇ ಬೆಳೆದ ಮುದ್ದಿನ ನನ್ನ ತಂಗಿ ಸೌಮ್ಯ (ಪ್ರಜ್ಙ). ಇಂದು ಭೌದ್ದಿಕ ಮಟ್ಟದಲ್ಲಿ ತುಂಬಾ ಎತ್ತರಕ್ಕೆ ಬೆಳೆದಿದ್ದಾಳೆ.
ಇದೇ ಶನಿವಾರ ಮಧ್ಯಾಹ್ನ ೩:೩೦ ಕ್ಕೆ ಅವಳ ಪ್ರಥಮ ಕಥಾ ಸಂಕಲನ ಬಿಡುಗಡೆ. ದಯವಿಟ್ಟು ಬನ್ನಿ. ಅವಳಿಗೆ ನಿಮ್ಮ ಪ್ರೀತಿಪೂರ್ವಕ ಹರಕೆ ಇರಲಿ.

ನಿಮ್ಮವ
ಪ್ರಶಾಂತ

About Me

My photo
ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿಗೋಸ್ಕರ ಬದುಕುತ್ತಿರುವ ನಿರುಪದ್ರವಿ ಮಾನವ ಪ್ರಾಣಿ