Friday, 7 September 2012

ಅಂತರಂಗದ ಅಳಲು

ನಾನೇಕೋ ಜೀವನದಲ್ಲಿ ಸಣ್ಣಪುಟ್ಟ ಸಂತೋಷಗಳನ್ನು ಕಳೆದು ಕೊಳ್ಳುತ್ತಿದ್ದೇನ ಎಂಬ ನೋವು ಕಾಡುತ್ತಿದೆ.


ಬಾಲ್ಯದಲ್ಲಿ ಪಕ್ಕದ ಮನೆಯ ದೋಬಿಯ ಬಟ್ಟೆ ಒಗಯುವ ಟ್ಯಾಂಕ್ ನಲ್ಲಿ ಪಟಾಕಿ ಸಿಡಿಸಿದಾಗ ಸಿಗುತ್ತಿದ್ದ ಖುಶಿ,

ಭಾಷಣ ಸ್ಪರ್ಧೆಯಲ್ಲಿ ಬಹುಮಾನ ಸಿಕ್ಕಾಗ ಆಗುತ್ತಿದ್ದ ಸಂತಸ, ಅಜ್ಜ ಚಾಕೊಲೇಟ್ ತಂದು ಕಟ್ಟಾಗ ಸಿಗುತ್ತಿದ್ದ ಆನಂದ ಎಲ್ಲಿ ಕಳೆದು ಹೋಯಿತು? ನವರಾತ್ರಿಯ ದಿನ ಹುಲಿವೇಷ ಕುಣಿದು ಸಿಕ್ಕ ಚಿಲ್ಲರೆ ದುಡ್ಡಿನಲ್ಲಿ ಹೋಟೆಲಿನಲ್ಲಿ ದೋಸೆ ತಿನ್ನುತ್ತಿದ್ದಾಗ ಆಗುತ್ತಿದ್ದ ಸಂತೋಷ ಏನಾಯಿತು?

ಬೆಂಗಳೂರಿಗೆ ಬಂದ ಹೊಸತರಲ್ಲಿ ಇದ್ದ ಸಣ್ಣಪುಟ್ಟ ಕನಸುಗಳು, ಚಿಕ್ಕ ಪುಟ್ಟ ಬಯಕಗಳು, ಅದಕ್ಕೋಸ್ಕರ ಮಾಡುತ್ತಿದ್ದ ಪ್ಲಾನ್ ಗಳಲ್ಲಿ ಕಾಣುತ್ತಿದ್ದ ನೆಮ್ಮದಿ ಎಲ್ಲಿ ಕಣ್ಮರೆಯಾಯಿತು?
ವಿದ್ಯಾರ್ಥಿ ಭವನದ ಮಸಾಲ ದೋಸೆ ರುಚಿ ನೆನೆಸಿದಾಗಲೆಲ್ಲ ನಾಲಿಗೆಯಲ್ಲಿ ನೀರೂರುತ್ತಿತ್ತು. ಈಗ ಪಂಚತಾರ ಹೋಟೆಲಿನ ವಿವಿದ ಖಾದ್ಯಗಳೇಕೆ ರುಚಿಸುತ್ತಿಲ್ಲ.

ಜೀವನದಲ್ಲಿ ಹಂತ ಹಂತವಾಗಿ ಬೆಳೆಯುತ್ತಿದ್ದಂತೆ, ಕನಸುಗಳು ಸಾಕಾರವಾಗುತ್ತಿದ್ದಂತೆ ಆಸೆಯೆಂಬ ಮರೀಚಿಕೆಯ ಬೆನ್ನು ಹತ್ತುತ್ತೇವೇನೋ?

ದುರಾಸೆಯ ಪ್ರಭಾವ ಜೀವನವನ್ನು ಆವರಿಸಿಕೊಳ್ಳುತ್ತಿದೆಯೇನೋ ಎಂಬ ಭಯ ಕಾಡುತ್ತಿದೆ.

Saturday, 25 August 2012

ಮತ್ತೊಮ್ಮೆ ಬಾ ಶ್ಯಾಮ

ಬಾರದ ಕೃಷ್ಣನಿಗಾಗಿ ಕಾಯುತ್ತಿದ್ದಾಳೆ ರಾಧೆ
ಆತನ ನಿರೀಕ್ಷೆಯಲ್ಲೇ ಕೊರಗಿ ಸೊರಗಿದ್ದಾಳೆ

 ಅವನಿಗೋ ಅರಮನೆಯ ವೈಭೋಗ ಗೋಕುಲದ
ಹಳೆಯ ನೆನಪುಗಳನು ಅಳಿಸಿ ಹಾಕಿದೆ
ಹಾಲು ಮೊಸರ ರಾಶಿ ಕಣ್ಣ ಮುಂದೆ ಇರುವಾಗ
ಕಾಡುವುದೆನಿತು ಗೋಪಿಕಾ ಸ್ತ್ರೀಯರ ಮಣ್ಣಿನ ಕುಡಿಕೆ

ಹನಿ ನೀರು ಸೇರುತ್ತಿಲ್ಲ ಆತ ಕಣ್ಮರೆಯಾದಾಗಿನಿಂದ
ಮನದ ತುಂಬಾ ಕಳೆದ ಮಧುರ ನೆನಪುಗಳ ನೋವು
ಸುಂದರ ನಾಳೆಯಳ ಅನುಭವಿಸೆನುತ್ತಿದೆ ಪ್ರಪಂಚ
ಅವಳಿಗೋ ಅವನೇ ನಿನ್ನೆ ನಾಳೆ ಇಂದು ಎದೆಂದು

Tuesday, 6 December 2011

ಕನಸುಗಳು

ಕನಸುಗಳ ಮಾರುವ ಊರಿಗೆ ಬನ್ನಿ
ಅಲ್ಲಿ ಸಂತೆಯಲ್ಲಿ ಕುಳಿತಿದ್ದಾನೊಬ್ಬ ಸಂತ

ಕೊಳ್ಳುತ್ತಿದ್ದಾರೆಲ್ಲ ಬಣ್ಣಬಣ್ಣದ ಕನಸುಗಳ
ಇವ ಮಾತ್ರ ನಗುತ್ತಿದ್ದಾನೆ ಎಲ್ಲರ ಅವಸರ ನೋಡಿ
ಇಂದಿರುವುದು ನಾಳೆಯಿಲ್ಲ ನಾಳೆಯೆಂಬುದ ಕಂಡವರಿಲ್ಲ
ಆದರೂ ಕನಸುಗಳ ಮಾರಟಕ್ಕೆ ಧಕ್ಕೆ ಇಲ್ಲ

ಒಂದು ದಿನ ಬದುಕು ಬದಲಾಗಿ ಬಂಗಾರವಾಗುತ್ತದೆ
ಈ ಕನಸನ್ನು ಜನ ಹರಾಜಲ್ಲಿ ಕೂಗುತ್ತಿದ್ದಾರೆ
ಒಂದೇ ಬಾರಿ ಆ ಚೆಲುವೆ ನನ್ನವಳಾಗಲೆಂಬ ಕನಸಿಗೆ
ಎಲ್ಲಾ ಪ್ರಾಯದವರು ಸರದಿಯಲ್ಲಿ ಕಾಯುತ್ತಿದ್ದಾರೆ

ಮನಸ್ಸಿನ ಬಾವನೆಗಳ ಮುಚ್ಚಿಟ್ಟುಕೊಂಡು
ಬದುಕುತ್ತಿರುವ ನಮಗೆಲ್ಲಾ ಬದುಕುವ ಭರವಸೆ ಈ
ಕನಸುಗಳು ನನಸಾದರೆ ಕಲ್ಪನೆಗೂ ವಾಸ್ತವಕ್ಕು
ಆಗುವ ತಾಕಲಾಟದ ನೋವು ಯಾರಿಗೆ ಬೇಕು

Wednesday, 20 July 2011

ಬೇಡ ಇನ್ನೊಮ್ಮೆ

ಹೃದಯವೇ ಬೀಳಬೇಡ ಮತ್ತೊಮ್ಮೆ ಪ್ರೀತಿಯ ಬಲೆಯಲಿ
ಡೊಂಕು ನಾಯಿಬಾಲದಂತೆ ಎಂದೆಂದಿಗೂ ನೇರವಾಗದೆ
ಇರಬೇಡ

ಕೈ ಕೈ ಹಿಡಿದು ರಾಜ ರಾಣಿಯರು ನಾವು
ಈ ಲೋಕ ಇರುವುದೇ ನಮಗೆಂದು
ಭ್ರಮೆಯಲ್ಲಿ ಒಮ್ಮೆ ಬಿದ್ದಿದ್ದೆ ಅಂದು
ನೀರ ಗುಳ್ಳೆಯಂತೆ ಕನಸು ಕರಗಿ
ನೀರಿನಿಂದ ಹೊರತೆಗೆದ ಮೀನಿನಂತೆ
ನರಳಿದ್ದಷ್ಟು ಬೇಗ ಮರೆತು ಹೋಯಿತೆ

ಮಾಗಿಯ ಚಳಿಗೆ ಮಾಗಿದ ಮೈ ಮನ
ಬೆರೆತಾಗ ಹಂಚಿಕೊಂಡ ಭರವಸೆಗಳು
ಉಸಿರಿರುವವರೆಗು ಒಂದಾಗಿರುತ್ತೇವೆಂಬ
ಆಶ್ವಾಸನೆಗಳು ಅಷ್ಟುಬೇಗ ಅಳಿಸಿ ಹೋಯಿತೆ
ಚೂರಾದ ಮನಸ್ಸು ತೇಪೆ ಹಾಕಲು ಪಟ್ಟ ಶ್ರಮ
ಸಮಯ ಹರಣ ಮತ್ತೊಮ್ಮೆ ನೆನಪಿಸಿಕೊ

Saturday, 7 May 2011

ನೀ ನಾನಾಗಿದ್ದರೆ

ನೀನು ನಾನಾಗಿದ್ದರೆ ತಿಳಿಯುತ್ತಿತ್ತು ನನ್ನ ಮನದಾಳದ ತಳಮಳ
ನನ್ನ ಕನಸುಗಳೆಲ್ಲಾ ನೀನೇ ತುಂಬಿರುತ್ತಿದ್ದ ಆ ಕಳವಳ

ಹೇಳದೆ ಹೇಳಲಾಗದೆ ಮನಸಿನಲಿ ಉಳಿದ ಮಾತುಗಳೆಷ್ಟೋ
ಕಣ್ಣಂಚಿನಲಿ ಜಾರದಂತೆ ತಡೆದಿಟ್ಟ ಕಂಬನಿ ಹನಿಗಳೆಷ್ಟೋ
ನಿನ್ನ ನೆನಪಲೆ ಕಳೆದುಕೊಂಡ ಸವಿಘಳಿಗೆಗಳೆಷ್ಟೋ
ಒಂದು ನಿಮಿಷ ಮರೆಯಾದರೆ ನೀನು ನರಳಿದ ಕ್ಷಣಗಳೆಷ್ಟೋ

ಹೆಗಲಿಗೊರಗಿ ಸುಖನಿದ್ದೆಯಲಿ ನೀ ಕಳೆದು ಹೋಗುತ್ತಿದ್ದೆ
ಈ ಪ್ರೀತಿ ಕೊನೆ ತನಕವೆಂಬ ಭ್ರಮೆಯಲ್ಲಿ ನಾನಿರುತ್ತಿದ್ದೆ
ನೀ ಕಚ್ಚಿ ಕೊಟ್ಟ ಮಿಡಿ ಮಾವಿನ ಅಮೃತ ಸವಿಯ ಸ್ವರ್ಗ
ನೀ ಕಾರಣ ಕೊಡದೆ ತೊರೆದ ಹೋದ ನೋವಿನ ನರಕ

Thursday, 14 April 2011

ನನ್ನ ತಂಗಿಯ ಮೊದಲನೇ ಪುಸ್ತಕ ಬಿಡುಗಡೆ



ಆತ್ಮೀಯರೇ
ನನ್ನ ಕಣ್ಣೆದುರೇ ಬೆಳೆದ ಮುದ್ದಿನ ನನ್ನ ತಂಗಿ ಸೌಮ್ಯ (ಪ್ರಜ್ಙ). ಇಂದು ಭೌದ್ದಿಕ ಮಟ್ಟದಲ್ಲಿ ತುಂಬಾ ಎತ್ತರಕ್ಕೆ ಬೆಳೆದಿದ್ದಾಳೆ.
ಇದೇ ಶನಿವಾರ ಮಧ್ಯಾಹ್ನ ೩:೩೦ ಕ್ಕೆ ಅವಳ ಪ್ರಥಮ ಕಥಾ ಸಂಕಲನ ಬಿಡುಗಡೆ. ದಯವಿಟ್ಟು ಬನ್ನಿ. ಅವಳಿಗೆ ನಿಮ್ಮ ಪ್ರೀತಿಪೂರ್ವಕ ಹರಕೆ ಇರಲಿ.

ನಿಮ್ಮವ
ಪ್ರಶಾಂತ

Tuesday, 1 March 2011

ನಿನ್ನ ಪ್ರೀತಿಯ ಕಾಣಿಕೆ

ಕಣ್ಣಂಚಿನ ಕಂಬನಿ ತುಟಿಯಂಚಿನ ವಿಷಾದ
ಹ್ರದಯದಿ ಹೊತ್ತಿ ಉರಿಯುವ ಬೆಂಕಿ
ಎಲ್ಲಾ ನಿನ್ನ ಪ್ರೀತಿಯ ಕಾಣಿಕೆ

ಸುಮ್ಮನಿದ್ದ ನನ್ನಲ್ಲಿ ಕನಸುಗಳ ಚಿಗುರಿಸಿದವಳು ನೀನೆ
ಆನಂದ ಸಾಗರದಿ ತೇಲುತ್ತಿದ್ದ ನನ್ನ ಮುಳುಗಿಸಿದವಳು ನೀನೆ
ಭರವಸೆಯ ಭರಪೂರ ಹರಿಸಿ ಬದುಕು ಕಟ್ಟಿದವಳು ನೀನೆ
ಕಟ್ಟಿದ ಗೂಡನ್ನು ಒದ್ದು ನೆಲಸಮ ಮಾಡಿದವಳು ನೀನೆ

ನೀನೇಕೆ ಮುನಿಸಿಕೊಂಡು ಹೋದೆ ನನಗಂದು ತಿಳಿಯಲೇ ಇಲ್ಲ
ಮೂರ್ಖ ನಾನು ಸ್ವಾರ್ಥಕ್ಕೆ ನೀ ತೊಡಿಸಿದ್ದೆ ಪ್ರೀತಿ ಮುಖವಾಡ
ನಿನ್ನ ಹಗಲು ವೇಷದ ಆಟ ನನಗೇಕೋ ತಿಳಿಯಲೇ ಇಲ್ಲ
ಹಾಡು ಮರೆತ ಮೂಕ ಹಕ್ಕಿಯ ಯಾತನೆ ನನ್ನಲ್ಲಿಂದು

ಮರೆಯ ಬೇಕೆಂದರೂ ಹೇಗೆ ಮರಯಲೆ ನಾ ನಿನ್ನ
ಮೈ ಮೇಲಿನ ಮಚ್ಚೆ ಹಳೆ ಗಾಯದ ಗುರುತಿನಂತೆ ನೀನು
ಉತ್ತರ ಸಿಗದ ಪ್ರಶ್ನೆಗಳು ಕಾಡುವ ಅವಮಾನ
ಹುಸಿ ಕಾರಣ ಕೊಡಲಾದರು ಮತ್ತೊಮ್ಮೆ ಸಿಗುವೆಯಾ

Thursday, 23 December 2010

ಮನಗಾಳದ ಮಾತು

ನನ್ನ ಬಿಳಿ ಬಣ್ಣ ನೀ ತೆಗೆದುಕೊ
ನಿನ್ನ ಬಿಳಿ ಮನಸ್ಸು ನನಗೆ ಕೊಡು

ನನ್ನ ಸುಖದ ಸುಪ್ಪತ್ತಿಗೆಯ ನೀ ತೆಗೆದುಕೊ
ನಿನ್ನ ಸವಿ ನಿದ್ರೆಯ ಕಲ್ಲು ಮಂಚವ ನನಗೆ ಕೊಡು
ನನ್ನ ಅಹಂಕಾರ ಪ್ರತಿಷ್ಟೆಯ ನೀ ತೆಗೆದುಕೊ
ನಿನ್ನ ನಿರ್ಮಲ ಪ್ರೀತಿ ಸ್ನೇಹವ ನನಗೆ ಕೊಡು

ನನ್ನ ಅತೀ ಬುದ್ಧಿವಂತಿಕೆಯ ನೀ ತೆಗುದುಕೊ
ನಿನ್ನ ಮುಗ್ಧ ನಿಷ್ಕಲ್ಮಶ ಹೃದಯ ನನಗೆ ಕೊಡು
ನಿನ್ನೆಡೆಗೆ ಬರಲಿರುವ ತೊಡುಕುಗಳ ನಿ ತೆಗೆದುಕೊ
ನನ್ನ ನಿನ್ನಲ್ಲಿ ಸೇರಿಸಿ ಕೊಂಡು ಧನ್ಯನಾಗಿಸಿಕೊ

Wednesday, 1 December 2010

ನಾನೆಲ್ಲೋ ನೀನೆಲ್ಲೋ

ಮರಳ ಮನೆ ಮಾಡಿ ನೀ ಬರುವೆಯೆಂದು
ಕಾಯುತ್ತಿರುವೆ ಮಳೆಯ ಕಾಯುವ ನವಿಲಿನಂತೆ
ಅಲೆ ಬಂದು ಕೊಚ್ಚಿ ಕೊಂಡೊಯ್ಯುವ ಮುನ್ನ
ನೀ ಬಂದು ಕೂಡುವೆಯಾ ನನ್ನ

ಕಲ್ಲೆಸೆದು ಉರುಳುಸುತ್ತಿದ್ದ ಆ ಮಿಡಿ ಮಾವು
ನಿನ್ನ ಲಂಗದಂಚಿನಲಿ ಕಚ್ಚಿ ನೀ ಕೊಟ್ಟ ಪಾಲು
ಮನತುಂಬಿ ನನಗಾಗಿ ಹಾಡುತ್ತಿದ್ದ ಹಾಡು
ಬರಲಾರವೇ ಆ ದಿನಗಳು ಇನ್ನೊಮ್ಮೆ

ನನ್ನೊಳು ನೀ ನಿನ್ನೊಳು ನಾ ತುಂಬಿಕೊಂಡು
ಊರಿಗೇ ನಾವೇ ರಾಜ ರಾಣಿಯರಂತೆ ಮೆರೆದು
ನಿನ್ನ ಅಧರಾಮ್ರತವೇ ಹೊಟ್ಟೆ ಹಸಿವ ತಣಿಸುತ್ತಿದ್ದ
ಸವಿ ದಿನಗಳ ನೆನಪಲ್ಲೇ ಕಾಯುತ್ತಿರುವೆ

ನಾನೇ ನನ್ನ ಮೇಲೆ ನಂಬಿಕೆ ಕಳೆದುಕೊಂಡು
ಜೀವನದ ಕೊನೆಯ ತಿರುವಲ್ಲಿ ನಿಂತಿದ್ದಾಗ
ಭರವಸೆಯ ಭಾವ ಹರಿಸಿ ಪುನರ್ಜನ್ಮ ಕೊಟ್ಟ
ನೀ ಬರಲಾರೆ ಎಂದು ತಿಳಿದಿದ್ದರೂ ಕಾಯುತ್ತಿರುವೆ

Wednesday, 6 October 2010

ಆ ದಿನಗಳು

ಯಾಕೋ ಕಾರಣವಿಲ್ಲದೆ ಬೇಸರ ಕಾಡುತ್ತಿದೆ. ಎಲ್ಲಾ ಇದ್ದೂ ಏನೂ ಇಲ್ಲದಂತೆ. ಸಂತೆಯ ಮಧ್ಯೆ ಕಾಡುವ ಏಕಾಂತದಂತೆ.
ನಾನೂ ನನ್ನ ಗೆಳೆಯರೆಲ್ಲ ಅವರವರ ಯಾಂತ್ರಿಕ ಜೀವನದಲ್ಲಿ ಕಳೆದು ಹೋಗಿದ್ದೇವೆ.
ನಾನು ನನ್ನದೇ ಕನಸುಗಳನ್ನು ಕಟ್ಟಿಕೊಂಡು ಸಿಗದಿರುವುದರ ಹಿಂದೆ ಓಡುತ್ತಿದ್ದೇನೆ.

ಎಲ್ಲಿ ಕಳೆದು ಹೋದವು ಅಲ್ಪ ಸುಖದಲ್ಲಿ ಖುಶಿ ಪಡುತ್ತಿದ್ದ
ಆ ದಿನಗಳು
ಏನಾದವು ಸಣ್ಣ ಪುಟ್ಟದರಲ್ಲೂ ಅಗಾಧ ಸಂತಸ ಪಡುತ್ತಿದ್ದ
ಆ ದಿನಗಳು

ಹಾರಾಡುವ ಹಕ್ಕಿಯ ಕಂಡು ಕೌತುಕ ಪಡುತ್ತಿದ್ದ
ಆ ದಿನಗಳು
ಹಕ್ಕಿಗಿಂತೆತ್ತರದಿ ಹಾರಾಡುತ್ತಿರುವಾಗೇಕೆ ಸಂತಸ
ಉಕ್ಕುತ್ತಿಲ್ಲ

ಗುಲಾಬಿಯ ಮೇಲಿನೆ ಮಂಜಿನ ಸ್ಪರ್ಶಕೆ ಪುಳಕವಾಗುತ್ತಿದ್ದ
ಆ ದಿನಗಳು
ಹೂಗಳ ಪಲ್ಲಂಗದ ಮೇಲೇಕೆ ಚುಚ್ಚುತ್ತಿವೆ ಕೇವಲ
ಮುಳ್ಳುಗಳು

ಅರೆಹೊಟ್ಟೆಯಲ್ಲಿ ಮಲಗಿ ಹಬ್ಬದೂಟದ ಕನಸು ಕಂಡಾಗಿನ
ಪುಳಕ
ಪ್ರತಿದಿನ ಮೃಷ್ಟಾನ್ನ ಭೋಜನ ಮಾಡಿದರೂ ಏಕಿಲ್ಲ
ಸಂತಸ

Monday, 20 September 2010

ಕಾಲದ ಮಹಿಮೆ

ಮರೆಯಾಗಿತ್ತು ಕಾಣಬೇಕೆಂಬ ದಶಕಗಳ ತುಡಿತ
ಆಕೆಯ ನಿನ್ನೆ ಕಂಡಾಗ
ನನ್ನ ನಾನೇ ಪ್ರಶ್ನಿಸುವಂತಿತ್ತು ಇವಳೇನಾ
ನನ್ನಂದಿನ ಮನದನ್ನೆ

ಮನಸು ಹೊರಡುತ್ತಿತ್ತು ಬಣ್ಣದ ತೇರಿನ ಮೆರವಣಿಗೆ
ಅವಳ ಜೊತೆ
ಕನಸು ಮೀಸಲಾಗಿತ್ತು ಕೇವಲ ಅವಳಿಗೆ
ಇಂದವಳು ಅಪರಿಚಿತೆ

ಹಂಚಿ ತಿಂದ ಅನ್ನ ಹಾಲ ಬಿಳುಪಿನ ಅವಳ ಬಣ್ಣ
ತೆಕ್ಕೆಯಲ್ಲಿ ಕರಗುತ್ತಿದ್ದಾಗಿನೆ ದೈವಿಕ ಸುಖ
ಅವಳನ್ನಗಲಿದಾಗ ಶೂನ್ಯವಾಗಿ ಕಂಡಿದ್ದ ಜಗತ್ತು
ಭ್ರಮೆಯೇ ಎಂಬ ಶಂಕೆ

Monday, 16 August 2010

ವಿಜಯ ಹಾವನೂರ್

ನಿನ್ನೆ ಆದಿತ್ಯವಾರ ಸಂಜೆ ತುಂಬಾ ಅರ್ಥಪೂರ್ಣವಾಗಿ ಕಳೆದೆ. ಆತ್ಮೀಯರಾದ ವಿಜಯ ಹಾವನೂರ್ ಮನೆಗೆ ಬಂದಿದ್ದರು.
ವೃತ್ತಿಯಲ್ಲಿ ಸಂಸ್ಕೃತ ಅಧ್ಯಾಪಕರಾಗಿರುವ ಇವರು ಕರ್ನಾಟಕದ ಒಬ್ಬ ಉತ್ತಮ ಸುಗಮ ಸಂಗೀತ ಗಾಯಕ ಮತ್ತು ಸಂಯೋಜಕ.
ಎಲ್ಲದಕ್ಕಿಂತ ಮಿಗಿಲಾಗಿ ಇವರೊಬ್ಬ ಉತ್ತಮ ಸಂಸ್ಕಾರ ಹೊಂದಿರುವ ಸ್ನೇಹಜೀವಿ. ಅಮೇರಿಕಾದಲ್ಲಿ ನಡೆಯುವ ಅಕ್ಕ ಸಂಸ್ಠೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಿದ್ದತೆ ನಡೆಸುತ್ತಿದ್ದಾರೆ.
ನಾವಿಬ್ಬರೂ ಸೇರಿ ಅವರ ಬಗ್ಗೆ ಮಾಹಿತಿ ಕೊಡುವ ಒಂದು ಬ್ಲಾಗ್ ಶುರು ಮಾಡಿದ್ದೇವೆ. ದಯವಿಟ್ಟು ಭೇಟಿ ಕೊಡಿ. ನಮಸ್ಕಾರ.

http://vijayhavanur.blogspot.com/

Thursday, 29 July 2010

ನಾನು ನೀನು

ನಾನು ನೀನು ನೀನು ನಾನು
ಎಂದಾದೇವು ನೀನೇ ನಾನು ನಾನೇ ನೀನು

ವೈಣಿಕನಿಲದ ವೀಣೆಯ ತರದಿ
ನುಡಿಸುವರಿಲ್ಲದ ಕೊಳಲಿನ ತರದಿ
ಒಬ್ಬರನೊಬ್ಬರು ಅಗಲಿ ಬದುಕೆ
ಬರಡು ಮರುಭೂಮಿ ಜೀವಿತ

ಅರ್ಪಣೆ ಸಮರ್ಪಣೆ ಇಲ್ಲದ ಬಾಳು
ನೆನೆದರೇ ನಡುಕ ಮನದಲಿ
ಎಂದು ಮರೆತೇವು ನಮ್ಮ ಹಮ್ಮು
ಒಂದಾದೇವೆಂದು ನೆಮ್ಮದಿಯನರಸಲು

Saturday, 19 June 2010

ಪ್ರಾರ್ಥನೆ

ನಾಳೆಗಳ ಭಯದಲ್ಲಿ ನಿನ್ನೆಗಳ ಹತಾಶೆಯಲ್ಲಿ
ಕಳೆಯುತ್ತಿದೆ ಇಂದಿನ ಸುಂದರ ದಿನ

ಅವರಿವರ ಕಟುಕುಟುಕು ಮಾತಿನಲ್ಲಿ
ಮನವಿರಿಯುವ ಅಗೌರವದ ನೀತಿಯಲ್ಲಿ
ಮರೆತಿರುವೆ ಜೀವನದ ಗುರಿಯ

ರಾಮನಿಗೂ ತಪ್ಪಿದ್ದಲ್ಲ ಅಪವಾದ
ಸೀತೆಗೂ ತಪ್ಪಿದ್ದಲ್ಲ ನಿಂದನೆ
ಹುಲುಮಾನವನಾದ ನನಗೇಕೆ ಚಿಂತೆ

ನನ್ನಂತರಂಗವ ಶುದ್ದವಾಗಿಟ್ಟು ಕೊಂಡು
ನಿನ್ನ ಕರುಣೆಯ ಸೆಲೆಯ ಮರೆಯದೆ
ಬದುಕುವ ಬಾಗ್ಯವ ಕೊಡು ದೇವಾ

Saturday, 17 April 2010

ಹುಡುಕಾಟ

ಮನದ ಚೆಲುವ ತೋರಿಸುವ ಕನ್ನಡಿಯ
ಹುಡುಕುತ್ತಿದ್ದೆ
ಹುಚ್ಚ ಮುಖದ ಚೆಲುವ ನೋಡಿ ಖುಶಿ ಪಡೆಂದು
ನಗುತ್ತಿದ್ದರೆಲ್ಲಾ

ಅಮ್ಮನ ಪ್ರೀತಿಯ ಸೆಲೆ ತೋರಿಸುವ
ಪ್ರೇಯಸಿಯ ಒಲವಿನ ಅಲೆ ತೋರಿಸುವ
ಗೆಳೆಯನ ಆತ್ಮೀಯತೆಯ ನೆಲೆ ತೋರಿಸುವ
ಯಾರಾದರೂ ಒಬ್ಬರಿದ್ದಾರೆಯೆ ಹುಡುಕುತ್ತಿದ್ದೆ

ತಪ್ಪು ತಿದ್ದುವ ಪ್ರಬುದ್ದ ಗುರುವಿನಂತೆ
ಜೀವನದ ದಾರಿ ತೋರಿಸುವ ದಾರ್ಶನಿಕನಂತೆ
ಕೈ ಹಿಡಿದು ನಡೆಯುವ ಮುಗ್ಧ ಮಗುವಿನಂತೆ
ಯಾರಾದರೂ ಒಬ್ಬರಿದ್ದಾರೆಯೆ ಹುಡುಕುತ್ತಿದ್ದೆ

ದೊಡ್ಡ ಕಣ್ಣು ಬಿಟ್ಟು ಕಥೆ ಕೇಳುತ್ತಿದ್ದ ಗೆಳತಿಯಂತೆ
ರಾಮಾಯಣದ ನೀತಿ ಹೇಳುತ್ತಿದ್ದ ಅಜ್ಜನಂತೆ
ಹೊಟ್ಟೆ ಹಸಿದಾಗ ಅನ್ನ ಕೊಟ್ಟ ಅಕ್ಕನಂತೆ
ಯಾರಾದರೂ ಒಬ್ಬರಿದ್ದಾರೆಯೆ ಹುಡುಕುತ್ತಿದ್ದೆ

ಮುತ್ತು

ನನ್ನವಳ ಮುತ್ತಿನ ಮಳೆ
ಮನದಲ್ಲಿ ಸಂತಸದ ಹೊಳೆ
ಕಳೆಯಿತೆಲ್ಲಾ ದುಃಖದ ಕೊಳೆ

ನಾನೇ ಸ್ವರ ನನ್ನವಳೆ ರಾಗ
ಮಧು ಮಂಚವೇ ವೀಣೆ
ಕೂಡಿ ಕಳೆವ ಕಾಡಿ ಪಡೆವ
ಮುತ್ತುಗಳೇ ಮಧುರ ಗಾನ

ಮುತ್ತಿನ ಮತ್ತೇ ಗಮ್ಮತ್ತು
ಮರೆಯುವುದೆಲ್ಲಾ ದೌಲತ್ತು
ನೀನಾರೆಂದು ಮರೆಸುವುದೇ
ಅದರ ಹಕೀಕತ್ತು

ಸುರಿಯುವ ಸ್ವಾತಿಮಳೆ ನವಿಲಿನ
ಕುಣಿತಕ್ಕೆ ಆಸರೆಯಾದಂತೆ
ಒಣಗಿರುವ ಮನದ ಮರಕ್ಕೆ
ನೀರೆರೆಯುವುದು ನನ್ನವಳ ಮುತ್ತು

Wednesday, 27 January 2010

ನಿಲುಕದ ತಾರೆ

ನಿಲುಕದ ತಾರೆಗೆ ಚಾಚಿದೆ ಕ್ಯೆ
ಇದ್ದರೂ ದೂರ ಪಡೆಯಲಾರೆನೆಂಬ ಕಟು
ವಾಸ್ತವದ ಅರಿವಿದ್ದರೂ ಕೇಳದು ಮನ

ಎಷ್ಟೇ ಹೊಳೆದರೂ ಲೋಕಕ್ಕೆ ಬೆಳಕ
ಕೊಡದಿದ್ದರೂ ನನಗೇಕೋ ಅದರೆಡೆಗೆ
ತಡೆಯಲಾರದ ಸೆಳೆತ ದಿನೇ ದಿನೇ
ಮಿನುಗುತ್ತಾ ಗೊಳಿಸುತಿದೆ ಮನಸ ಚಂಚಲ

ಅಗಣಿತ ತಾರಾ ಮಂಡಲದ ಮಧ್ಯೆ
ನನ್ನ ಬಯಕೆ ಹಿಡಿಯಲೀ ಧ್ರುವತಾರೆಯ
ನನ್ನ ಕಂಡರೆ ತಡೆಯಲಾರದ ನಗು ಅದಕ್ಕೆ
ಸಹಸ್ರ ಕೋಟಿ ಅಭಿಮಾನಿಗಳಲ್ಲಿ ನಾನೊಬ್ಬ

ಎಂದಾದರೊಂದು ದಿನ ನನ್ನ ಬಯಕೆಯ
ತೀವ್ರತೆಗೆ ಕರಗಿ ಬಂದರೆ ನನ್ನೆಡೆಗೆ ಏನ ಮಾಡಲಿ
ಅದರ ಆಸೆಯಲ್ಲಿ ಕೊರಗುತ್ತಾ ಜೀವನ ಕಳೆಯುವುದೇ
ಮನಸ್ಸಿನಲ್ಲಿ ಕಣ್ಣೀರಾಗುವುದೇ ನೆಮ್ಮದಿ

Thursday, 7 January 2010

ಹೊಸವರ್ಷದ ಶುಭಾಶಯಗಳು

ನಾನು ಬರೆಯುವುದ ನನಗೆಂದು, ಎದೆ ಭಾರ ಕಳೆಯಲೆಂದು. ಬಿಡುವು ಮಾಡಿಕೊಂಡು ಬಂದು ಓದುವ ನಿಮ್ಮ ಪ್ರೀತಿಗೆಂದು.
ಪೇಜ್ ಕೌಂಟರ್ ಹಾಕಿ ೩ ತಿಂಗಳಾಯ್ತು. ೪೦೦ ಮಂದಿ ನನ್ನ ಬ್ಲಾಗ್ ವೀಕ್ಷಿಸಿದ್ದಾರೆ. ಕೆಲವರು ಮೆಚ್ಚಿ ಪ್ರೋತ್ಸಾಹಿಸಿದ್ದಾರೆ. ಅದೇ ನನಗೆ ಸಿಕ್ಕಿದ ಸನ್ಮಾನ.
ಯಾಕೋ ಕವಿತೆಯಷ್ಟು ಸುಲಭವಾಗಿ ಲೇಖನ ಬರೆಯಲು ನನಗಾಗುವುದಿಲ್ಲ. ಆದರೂ ಬರೆಯುವ ಪ್ರಯತ್ನ. ಕಟ್ಟಿ ಕೊಂಡವಳಿಗೆ ಕೋಡಂಗಿ ಮುದ್ದೆಂಬಂತೆ ನಾವು ಬರೆದದ್ದು ನಮಗಮೂಲ್ಯ.
೨೦೧೦ ನಿಯಮಿತವಾಗಿ ಬರೆಯಬೇಕೆಂಬ ಸಂಕಲ್ಪ ಮಾಡಿಕೊಂಡಿದ್ದೇನೆ. ಹೊಸವರ್ಷ ಆಗಲೇ ಚಿರಪರಿಚಿತವಾಗಿದೆ. ೨೦೦೯ ನೆನಪುಗಳು ಜ್ಯೂರಿಚ್ ಚಳಿಯಂತೆ ಉಡುಪಿಯ ಸೆಖೆಯಂತೆ ಪ್ರಖರವಾಗಿ ಕಾಡುತ್ತಿದೆ.
ನಿಮಗೆಲ್ಲ ಹೊಸವರ್ಷ ಹೊಸತನ, ಹೊಸ ಅನುಭವ, ಹೊಸಕನಸುಗಳ ಮೂಟೆಯನ್ನು ಹೊತ್ತು ತರಲಿ.
ಪ್ರೀತಿಯಿಂದ
ಪ್ರಶಾಂತ

Monday, 28 December 2009

ನಿನ್ನ ನೆನಪು

ನನ್ನ ಬಾಳ ನೆಮ್ಮದಿಗೆ ಕಿಚ್ಚನಿಟ್ಟು
ಸುಖವ ಕಸಿದು ಕೊಂಡ ನೀನು
ನನ್ನ ಸಮಾಧಿಯ ಮೇಲೆ
ಅರಮನೆ ಕಟ್ಟಿ ಸುಖವಾಗಿರು

ನನ್ನ ಕನಸುಗಳ ನುಚ್ಚುನೂರು ಮಾಡಿ
ಜೊತೆಯಾಗಿ ಬದುಕುವ ಆಸೆಗೆ
ತಣ್ಣೀರೆರಚಿದ ನೀನು ಬರಿದಾಗಿಸಿದೆ
ಎದೆನೆಲವ ಪ್ರೀತಿ ಇನ್ನೊಮ್ಮೆ ಬೆಳೆಯದಂತೆ

ಲಲನೆಯರು ಸುತ್ತಮುತ್ತ ಸೇರಿ
ಕೂಡುವ ಕಳೆಯುವ ಆಟಕೆ ಬರುವಂತೆ
ಪ್ರೇರೇಪಿಸೆ ಅವರ ಕಡೆಗಣಿಸಿ
ಷಂಡನೆಂಬ ಬಿರುದು ಬರುವಂತೆ ಮಾಡಿದೆ ನೀನು

About Me

My photo
ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿಗೋಸ್ಕರ ಬದುಕುತ್ತಿರುವ ನಿರುಪದ್ರವಿ ಮಾನವ ಪ್ರಾಣಿ