Tuesday, 1 March 2011

ನಿನ್ನ ಪ್ರೀತಿಯ ಕಾಣಿಕೆ

ಕಣ್ಣಂಚಿನ ಕಂಬನಿ ತುಟಿಯಂಚಿನ ವಿಷಾದ
ಹ್ರದಯದಿ ಹೊತ್ತಿ ಉರಿಯುವ ಬೆಂಕಿ
ಎಲ್ಲಾ ನಿನ್ನ ಪ್ರೀತಿಯ ಕಾಣಿಕೆ

ಸುಮ್ಮನಿದ್ದ ನನ್ನಲ್ಲಿ ಕನಸುಗಳ ಚಿಗುರಿಸಿದವಳು ನೀನೆ
ಆನಂದ ಸಾಗರದಿ ತೇಲುತ್ತಿದ್ದ ನನ್ನ ಮುಳುಗಿಸಿದವಳು ನೀನೆ
ಭರವಸೆಯ ಭರಪೂರ ಹರಿಸಿ ಬದುಕು ಕಟ್ಟಿದವಳು ನೀನೆ
ಕಟ್ಟಿದ ಗೂಡನ್ನು ಒದ್ದು ನೆಲಸಮ ಮಾಡಿದವಳು ನೀನೆ

ನೀನೇಕೆ ಮುನಿಸಿಕೊಂಡು ಹೋದೆ ನನಗಂದು ತಿಳಿಯಲೇ ಇಲ್ಲ
ಮೂರ್ಖ ನಾನು ಸ್ವಾರ್ಥಕ್ಕೆ ನೀ ತೊಡಿಸಿದ್ದೆ ಪ್ರೀತಿ ಮುಖವಾಡ
ನಿನ್ನ ಹಗಲು ವೇಷದ ಆಟ ನನಗೇಕೋ ತಿಳಿಯಲೇ ಇಲ್ಲ
ಹಾಡು ಮರೆತ ಮೂಕ ಹಕ್ಕಿಯ ಯಾತನೆ ನನ್ನಲ್ಲಿಂದು

ಮರೆಯ ಬೇಕೆಂದರೂ ಹೇಗೆ ಮರಯಲೆ ನಾ ನಿನ್ನ
ಮೈ ಮೇಲಿನ ಮಚ್ಚೆ ಹಳೆ ಗಾಯದ ಗುರುತಿನಂತೆ ನೀನು
ಉತ್ತರ ಸಿಗದ ಪ್ರಶ್ನೆಗಳು ಕಾಡುವ ಅವಮಾನ
ಹುಸಿ ಕಾರಣ ಕೊಡಲಾದರು ಮತ್ತೊಮ್ಮೆ ಸಿಗುವೆಯಾ

Thursday, 23 December 2010

ಮನಗಾಳದ ಮಾತು

ನನ್ನ ಬಿಳಿ ಬಣ್ಣ ನೀ ತೆಗೆದುಕೊ
ನಿನ್ನ ಬಿಳಿ ಮನಸ್ಸು ನನಗೆ ಕೊಡು

ನನ್ನ ಸುಖದ ಸುಪ್ಪತ್ತಿಗೆಯ ನೀ ತೆಗೆದುಕೊ
ನಿನ್ನ ಸವಿ ನಿದ್ರೆಯ ಕಲ್ಲು ಮಂಚವ ನನಗೆ ಕೊಡು
ನನ್ನ ಅಹಂಕಾರ ಪ್ರತಿಷ್ಟೆಯ ನೀ ತೆಗೆದುಕೊ
ನಿನ್ನ ನಿರ್ಮಲ ಪ್ರೀತಿ ಸ್ನೇಹವ ನನಗೆ ಕೊಡು

ನನ್ನ ಅತೀ ಬುದ್ಧಿವಂತಿಕೆಯ ನೀ ತೆಗುದುಕೊ
ನಿನ್ನ ಮುಗ್ಧ ನಿಷ್ಕಲ್ಮಶ ಹೃದಯ ನನಗೆ ಕೊಡು
ನಿನ್ನೆಡೆಗೆ ಬರಲಿರುವ ತೊಡುಕುಗಳ ನಿ ತೆಗೆದುಕೊ
ನನ್ನ ನಿನ್ನಲ್ಲಿ ಸೇರಿಸಿ ಕೊಂಡು ಧನ್ಯನಾಗಿಸಿಕೊ

Wednesday, 1 December 2010

ನಾನೆಲ್ಲೋ ನೀನೆಲ್ಲೋ

ಮರಳ ಮನೆ ಮಾಡಿ ನೀ ಬರುವೆಯೆಂದು
ಕಾಯುತ್ತಿರುವೆ ಮಳೆಯ ಕಾಯುವ ನವಿಲಿನಂತೆ
ಅಲೆ ಬಂದು ಕೊಚ್ಚಿ ಕೊಂಡೊಯ್ಯುವ ಮುನ್ನ
ನೀ ಬಂದು ಕೂಡುವೆಯಾ ನನ್ನ

ಕಲ್ಲೆಸೆದು ಉರುಳುಸುತ್ತಿದ್ದ ಆ ಮಿಡಿ ಮಾವು
ನಿನ್ನ ಲಂಗದಂಚಿನಲಿ ಕಚ್ಚಿ ನೀ ಕೊಟ್ಟ ಪಾಲು
ಮನತುಂಬಿ ನನಗಾಗಿ ಹಾಡುತ್ತಿದ್ದ ಹಾಡು
ಬರಲಾರವೇ ಆ ದಿನಗಳು ಇನ್ನೊಮ್ಮೆ

ನನ್ನೊಳು ನೀ ನಿನ್ನೊಳು ನಾ ತುಂಬಿಕೊಂಡು
ಊರಿಗೇ ನಾವೇ ರಾಜ ರಾಣಿಯರಂತೆ ಮೆರೆದು
ನಿನ್ನ ಅಧರಾಮ್ರತವೇ ಹೊಟ್ಟೆ ಹಸಿವ ತಣಿಸುತ್ತಿದ್ದ
ಸವಿ ದಿನಗಳ ನೆನಪಲ್ಲೇ ಕಾಯುತ್ತಿರುವೆ

ನಾನೇ ನನ್ನ ಮೇಲೆ ನಂಬಿಕೆ ಕಳೆದುಕೊಂಡು
ಜೀವನದ ಕೊನೆಯ ತಿರುವಲ್ಲಿ ನಿಂತಿದ್ದಾಗ
ಭರವಸೆಯ ಭಾವ ಹರಿಸಿ ಪುನರ್ಜನ್ಮ ಕೊಟ್ಟ
ನೀ ಬರಲಾರೆ ಎಂದು ತಿಳಿದಿದ್ದರೂ ಕಾಯುತ್ತಿರುವೆ

Wednesday, 6 October 2010

ಆ ದಿನಗಳು

ಯಾಕೋ ಕಾರಣವಿಲ್ಲದೆ ಬೇಸರ ಕಾಡುತ್ತಿದೆ. ಎಲ್ಲಾ ಇದ್ದೂ ಏನೂ ಇಲ್ಲದಂತೆ. ಸಂತೆಯ ಮಧ್ಯೆ ಕಾಡುವ ಏಕಾಂತದಂತೆ.
ನಾನೂ ನನ್ನ ಗೆಳೆಯರೆಲ್ಲ ಅವರವರ ಯಾಂತ್ರಿಕ ಜೀವನದಲ್ಲಿ ಕಳೆದು ಹೋಗಿದ್ದೇವೆ.
ನಾನು ನನ್ನದೇ ಕನಸುಗಳನ್ನು ಕಟ್ಟಿಕೊಂಡು ಸಿಗದಿರುವುದರ ಹಿಂದೆ ಓಡುತ್ತಿದ್ದೇನೆ.

ಎಲ್ಲಿ ಕಳೆದು ಹೋದವು ಅಲ್ಪ ಸುಖದಲ್ಲಿ ಖುಶಿ ಪಡುತ್ತಿದ್ದ
ಆ ದಿನಗಳು
ಏನಾದವು ಸಣ್ಣ ಪುಟ್ಟದರಲ್ಲೂ ಅಗಾಧ ಸಂತಸ ಪಡುತ್ತಿದ್ದ
ಆ ದಿನಗಳು

ಹಾರಾಡುವ ಹಕ್ಕಿಯ ಕಂಡು ಕೌತುಕ ಪಡುತ್ತಿದ್ದ
ಆ ದಿನಗಳು
ಹಕ್ಕಿಗಿಂತೆತ್ತರದಿ ಹಾರಾಡುತ್ತಿರುವಾಗೇಕೆ ಸಂತಸ
ಉಕ್ಕುತ್ತಿಲ್ಲ

ಗುಲಾಬಿಯ ಮೇಲಿನೆ ಮಂಜಿನ ಸ್ಪರ್ಶಕೆ ಪುಳಕವಾಗುತ್ತಿದ್ದ
ಆ ದಿನಗಳು
ಹೂಗಳ ಪಲ್ಲಂಗದ ಮೇಲೇಕೆ ಚುಚ್ಚುತ್ತಿವೆ ಕೇವಲ
ಮುಳ್ಳುಗಳು

ಅರೆಹೊಟ್ಟೆಯಲ್ಲಿ ಮಲಗಿ ಹಬ್ಬದೂಟದ ಕನಸು ಕಂಡಾಗಿನ
ಪುಳಕ
ಪ್ರತಿದಿನ ಮೃಷ್ಟಾನ್ನ ಭೋಜನ ಮಾಡಿದರೂ ಏಕಿಲ್ಲ
ಸಂತಸ

Monday, 20 September 2010

ಕಾಲದ ಮಹಿಮೆ

ಮರೆಯಾಗಿತ್ತು ಕಾಣಬೇಕೆಂಬ ದಶಕಗಳ ತುಡಿತ
ಆಕೆಯ ನಿನ್ನೆ ಕಂಡಾಗ
ನನ್ನ ನಾನೇ ಪ್ರಶ್ನಿಸುವಂತಿತ್ತು ಇವಳೇನಾ
ನನ್ನಂದಿನ ಮನದನ್ನೆ

ಮನಸು ಹೊರಡುತ್ತಿತ್ತು ಬಣ್ಣದ ತೇರಿನ ಮೆರವಣಿಗೆ
ಅವಳ ಜೊತೆ
ಕನಸು ಮೀಸಲಾಗಿತ್ತು ಕೇವಲ ಅವಳಿಗೆ
ಇಂದವಳು ಅಪರಿಚಿತೆ

ಹಂಚಿ ತಿಂದ ಅನ್ನ ಹಾಲ ಬಿಳುಪಿನ ಅವಳ ಬಣ್ಣ
ತೆಕ್ಕೆಯಲ್ಲಿ ಕರಗುತ್ತಿದ್ದಾಗಿನೆ ದೈವಿಕ ಸುಖ
ಅವಳನ್ನಗಲಿದಾಗ ಶೂನ್ಯವಾಗಿ ಕಂಡಿದ್ದ ಜಗತ್ತು
ಭ್ರಮೆಯೇ ಎಂಬ ಶಂಕೆ

Monday, 16 August 2010

ವಿಜಯ ಹಾವನೂರ್

ನಿನ್ನೆ ಆದಿತ್ಯವಾರ ಸಂಜೆ ತುಂಬಾ ಅರ್ಥಪೂರ್ಣವಾಗಿ ಕಳೆದೆ. ಆತ್ಮೀಯರಾದ ವಿಜಯ ಹಾವನೂರ್ ಮನೆಗೆ ಬಂದಿದ್ದರು.
ವೃತ್ತಿಯಲ್ಲಿ ಸಂಸ್ಕೃತ ಅಧ್ಯಾಪಕರಾಗಿರುವ ಇವರು ಕರ್ನಾಟಕದ ಒಬ್ಬ ಉತ್ತಮ ಸುಗಮ ಸಂಗೀತ ಗಾಯಕ ಮತ್ತು ಸಂಯೋಜಕ.
ಎಲ್ಲದಕ್ಕಿಂತ ಮಿಗಿಲಾಗಿ ಇವರೊಬ್ಬ ಉತ್ತಮ ಸಂಸ್ಕಾರ ಹೊಂದಿರುವ ಸ್ನೇಹಜೀವಿ. ಅಮೇರಿಕಾದಲ್ಲಿ ನಡೆಯುವ ಅಕ್ಕ ಸಂಸ್ಠೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಿದ್ದತೆ ನಡೆಸುತ್ತಿದ್ದಾರೆ.
ನಾವಿಬ್ಬರೂ ಸೇರಿ ಅವರ ಬಗ್ಗೆ ಮಾಹಿತಿ ಕೊಡುವ ಒಂದು ಬ್ಲಾಗ್ ಶುರು ಮಾಡಿದ್ದೇವೆ. ದಯವಿಟ್ಟು ಭೇಟಿ ಕೊಡಿ. ನಮಸ್ಕಾರ.

http://vijayhavanur.blogspot.com/

Thursday, 29 July 2010

ನಾನು ನೀನು

ನಾನು ನೀನು ನೀನು ನಾನು
ಎಂದಾದೇವು ನೀನೇ ನಾನು ನಾನೇ ನೀನು

ವೈಣಿಕನಿಲದ ವೀಣೆಯ ತರದಿ
ನುಡಿಸುವರಿಲ್ಲದ ಕೊಳಲಿನ ತರದಿ
ಒಬ್ಬರನೊಬ್ಬರು ಅಗಲಿ ಬದುಕೆ
ಬರಡು ಮರುಭೂಮಿ ಜೀವಿತ

ಅರ್ಪಣೆ ಸಮರ್ಪಣೆ ಇಲ್ಲದ ಬಾಳು
ನೆನೆದರೇ ನಡುಕ ಮನದಲಿ
ಎಂದು ಮರೆತೇವು ನಮ್ಮ ಹಮ್ಮು
ಒಂದಾದೇವೆಂದು ನೆಮ್ಮದಿಯನರಸಲು

About Me

My photo
ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿಗೋಸ್ಕರ ಬದುಕುತ್ತಿರುವ ನಿರುಪದ್ರವಿ ಮಾನವ ಪ್ರಾಣಿ