Friday, 2 January 2009

ಜೊತೆಗೆ ನೀನಿರಬೇಕಿತ್ತು ಗೆಳತಿ

ಮಾತು ಸಾಕಾದಾಗ ಮೌನವೇ ಸಂಗಾತಿಯಾದಾಗ
ಮನಸ್ಸು ಮಂಕಾದಾಗ ಚಿಲಿಪಿಲಿ ದನಿಗಳು ಕೇಳದಾದಾಗ
ಜೊತೆಗೆ ನೀನಿರಬೇಕಿತ್ತು ಗೆಳತಿ

ಹೃದಯ ಏಕಾಂತ ಸಾಕೆಂದು ಚೀರಿದಾಗ
ಆತ್ಮ ಸಂಗಾತಿ ಬೇಕೆಂದು ಬಗೆ ಬಗೆಯಾಗಿ ಕೇಳಿದಾಗ
ಜೊತೆಗೆ ನೀನಿರಬೇಕಿತ್ತು ಗೆಳತಿ

ಭಯಾನಕ ಕನಸುಗಳೇ ರಾತ್ರಿ ಸಖರಾದಾಗ
ನೀರವ ಏಕಾಂತ ನೆಮ್ಮದಿಯನ್ನು ಕಿತ್ತು ತಿನ್ನುವಾಗ
ಜೊತೆಗೆ ನೀನಿರಬೇಕಿತ್ತು ಗೆಳತಿ

ಹುಣ್ಣಿಮೆ ಚಂದ್ರ ಬಿರು ಬಿಸಿಲಾಗಿ ಸುಡುವಾಗ
ಹೊಳೆಯುವ ನಕ್ಷತ್ರಗಳು ಕಣ್ಣನ್ನು ಚೂರಿಯಾಗಿ ಚುಚ್ಚಿದಾಗ
ಜೊತೆಗೆ ನೀನಿರಬೇಕಿತ್ತು ಗೆಳತಿ

ಸುರಿಯುವ ಮಂಜು ಕೆಂಡವಾದಾಗ
ನಡೆಯುವ ಹೆಜ್ಜೆ ಜೋಲಿ ತಪ್ಪಿ ಬಿದ್ದಾಗ
ಜೊತೆಗೆ ನೀನಿರಬೇಕಿತ್ತು ಗೆಳತಿ

ಸುಂದರ ಮುಂಜಾವು ಮನಸ್ಸಲ್ಲಿ ಭಾವನೆ ಅರಳಿಸದಾಗ
ತಂಪಾದ ಸಂಜೆ ದೇಹದಲ್ಲಿ ಕಾಮನೆ ಕೆರಳಿಸದಾಗ
ಜೊತೆಗೆ ನೀನಿರಬೇಕಿತ್ತು ಗೆಳತಿ

ಕಣ್ಣೀರು ಕೋಡಿಯಾಗಿ ಹರಿದು ಗಂಟಲೊತ್ತಿ ಬಂದಾಗ
ಉಕ್ಕಿ ಬರುವ ದುಃಖದಿಂದ ಬಾಗಿಲಿ ಚಿಲಕ ಹಾಕಿದಾಗ
ಜೊತೆಗೆ ನೀನಿರಬೇಕಿತ್ತು ಗೆಳತಿ

ಮನೆ ಮನೆಗಳಲ್ಲಿ ದೀಪ ಬೆಳಗಿ ಸಂಭ್ರಮದಲ್ಲಿದ್ದಾಗ
ನನ್ನ ಮನದಲ್ಲಿ ಕಾರ್ಗತ್ತಲೆ ತುಂಬಿದ್ದಾಗ
ಜೊತೆಗೆ ನೀನಿರಬೇಕಿತ್ತು ಗೆಳತಿ

ಸುತ್ತ ಮುತ್ತ ತಂಪಾದ ವಾತಾವರಣವಿದ್ದಾಗ
ನನ್ನೊಳಗಿನ ಸುಡುವ ಬೆಂಕಿ ನೆಮ್ಮದಿ ಕಿತ್ತು ಕೊಂಡಾಗ
ಜೊತೆಗೆ ನೀನಿರಬೇಕಿತ್ತು ಗೆಳತಿ

ನಡುರಾತ್ರಿಯಲ್ಲಿ ಕಿಟಕಿಯ ಪಕ್ಕ ನೆರಳು ಸರಿದಂತಾಗಿ
ಬಾಗಿಲ ಮೇಲೆ ಕುಟ್ಟಿದ ಸದ್ದಿನ ಭ್ರಮೆಯಿಂದ ಮೈ ಬೆವತಾಗ
ಜೊತೆಗೆ ನೀನಿರಬೇಕಿತ್ತು ಗೆಳತಿ

ಕಣ್ಣಿಗೆ ಎಣ್ಣೆ ಬಿಟ್ಟಂತೆ ನಿದ್ದೆ ದೂರವಾಗಿದ್ದಾಗ
ಕ್ಷಣವೊಂದು ಯುಗವಾಗಿ ಕಳೆಯುತ್ತಿದ್ದಾಗ ಜೋಗುಳ ಹಾಡಲು
ಜೊತೆಗೆ ನೀನಿರಬೇಕಿತ್ತು ಗೆಳತಿ

ಭಾವಗಳನ್ನು ಹಾಡಾಗಿ ಹೊಮ್ಮಿಸ ಬೇಕೆಂದಿದ್ದಾಗ
ಎದೆಯ ನೋವು ಹಗುರಾಗ ಬೇಕಾದಾಗ ದನಿಗೆ ದನಿ ಸೇರಿಸಲು
ಜೊತೆಗೆ ನೀನಿರಬೇಕಿತ್ತು ಗೆಳತಿ

ಕೊರೆಯುವ ಚಳಿ ಮೈ ಮೂಳೆ ಕತ್ತರಿಸುತ್ತಿದ್ದಾಗ
ಸುರಿಯುವ ಮಳೆ ನಡುಗಿಸುತ್ತಿದ್ದಾಗ ಬೆಚ್ಚಗೆ ತಬ್ಬಿ ಕೊಳ್ಳಲು
ಜೊತೆಗೆ ನೀನಿರಬೇಕಿತ್ತು ಗೆಳತಿ

ಕೈಗೆ ಕೈ ಸೇರಿಸಿ ಜೊತೆಯಾಗಿ ನಡೆಯ ಬೇಕೆನಿಸಿದಾಗ
ತೀರದಂಚಿನಲ್ಲಿ ಕುಳಿತು ಹಾಯಿ ದೋಣಿ ನೋಡ ಬೇಕೆನಿಸಿದಾಗ
ಜೊತೆಗೆ ನೀನಿರಬೇಕಿತ್ತು ಗೆಳತಿ

ಜಗತ್ತೇ ಶೂನ್ಯವಾಗಿ ಮನ ರೋಧಿಸುತ್ತಿದ್ದಾಗ
ನಿನ್ನ ಕಾಲದಿಂಬಿನ ಮೇಲೆ ಮಲಗಿ ಶಾಂತಿಯನ್ನರಸಲು
ಜೊತೆಗೆ ನೀನಿರಬೇಕಿತ್ತು ಗೆಳತಿ

About Me

My photo
ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿಗೋಸ್ಕರ ಬದುಕುತ್ತಿರುವ ನಿರುಪದ್ರವಿ ಮಾನವ ಪ್ರಾಣಿ