ರಾಮಾ ಭಟ್ರು ಪ್ರಸನ್ನ ವದನರಾಗಿಯೇ ದೇವಾಲಯದ ಪ್ರಾಂಗಣದಲ್ಲಿ ನೆಡೆದುಕೊಂಡು ಹೋಗುತ್ತಿದ್ದರು. ಆವತ್ತು ಜಯಶೆಟ್ರು ಮತ್ತು ಕುಟುಂಬದವರ ವಿಶೇಷ ಪೂಜೆ ನಡೆದಿತ್ತು.ದಕ್ಷಿಣೆ, ಮಂಗಳಾರತಿ ತಟ್ಟೆ ಎಲ್ಲಾ ಭರ್ಜರಿಯಾಗಿಯೇ ತುಂಬಿತ್ತು. ಹಾಗಾಗಿ ಮ೦ದಹಾಸ ಮುಖದಲ್ಲಿ ತುಂಬಿ ತುಳುಕುತ್ತಿತ್ತು.ಅಷ್ತರಲ್ಲಿ ರಸಾಭಾಸ. ಕಸಗುಡಿಸುವ ಕೀಳು ಜಾತಿಯ ಗುಲ್ಲಿಯ ೩ ವರ್ಷದ ಮಗ ಸೇಕರ ಓಡಿಬಂದು ಭಟ್ಟರನ್ನು ಮುಟ್ಟಿಬಿಟ್ಟ. ಅಯ್ಯೋ ಅಪಶಕುನ ಮುಂಡೇದೆ ಎಂದು ಬ್ಯೆಯತ್ತಾ ಭಟ್ಟರು ಸ್ನಾನ ಮಾಡಲು ಬಾವಿ ಕಟ್ಟೆಗೆ ನಡೆದರು. ಬಿಡಿ ಭಟ್ರೆ ನಿಮ್ದೇ ಮಗ ಅಲ್ವ ಯಾಕೆ ಅಷ್ಟು ಕೋಪ ಎಂದು ಗುಲ್ಲಿ ರಾಗವಾಗಿ ನುಡಿದಾಗ ಭಟ್ರು ಹೆದರಿ ಅತ್ತಿತ್ತ ನೋಡಿದರು. ಯಾರೂ ಇಲ್ಲ ಬಿಡಿ ನೋಡಿಕೊಂಡೇ ಹೇಳಿದ್ದು ಎಂದು ಗುಲ್ಲಿ ವ್ಯೆಯಾರದಿ ನುಡಿಯಲು ಭಟ್ರು ಉತ್ತರಿಸದೆ ಮುನ್ನಡೆದರು.
ಅಮ್ಮನಿಗೆ ಸಾಯುವಾಗ ಕೊಟ್ಟ ಭಾಷೆಯಂತೆ ಸೋದರ ಮಾವನ ಮಗಳು ಜಾನಕಿಯನ್ನೇ ಮದುವೆಯಾಗಿದ್ದರು ರಾಮಾ ಭಟ್ರು ೪ ವರ್ಷದ ಹಿಂದೆ. ಆದರೆ ಪ್ರಥಮ ರಾತ್ರಿಯೇ ತಿಳಿದು ಹೋಯಿತು ಭಟ್ರಿಗೆ ತನ್ನ ರಸಿಕತೆ ಹೆಂಡತಿಗೆ ಅರ್ಥವಾಗುವುದಿಲ್ಲವೆಂದು. ತಿಂಗಳಿಗೆ ೨೦ ದಿನ ವ್ರತ ಇನ್ನೂ ಹತ್ತು ದಿನ ಬೇರೆ ಕಾರಣದಿಂದ ಜಾನಕಿ ಭಟ್ರಿಗೆ ಸಹಕರಿಸುವುದಿಲ್ಲ. ಸ್ವಭಾವತ ಸಾಧು ಮನುಷ್ಯ ನಮ್ಮ ಭಟ್ರು. ಹಾಗಾಗಿ ಹೆಂಡತಿಯನ್ನು ಜೋರು ಮಾಡಲಾರರು. ಸೋದರ ಮಾವನ ೧೦ ಎಕರೆಯ ಜಮೀನೂ ಕಾರಣವಿದ್ದಿತೊ ಏನೊ?
ಆಸೆಯ ಕಣ್ಣಿನಿಂದ ಕಡೆದ ವಿಗ್ರಹದಂತಿದ್ದ ಗುಲ್ಲಿಯನ್ನೇ ನೋಡುತ್ತಿದ್ದರು ನಮ್ಮ ಕಥಾನಾಯಕ ಭಟ್ರು ಒಂದು ದಿನ. ಜಾಣೆ ಗುಲ್ಲಿಗೆ ಅರಿವಾಯಿತು ಭಟ್ರ ಬಯಕೆ. ಗುಲ್ಲಿಯ ಗಂಡ ರಾಘು ನೀರಿಗಿಂತಲೂ ಶರಾಬು ಜಾಸ್ತಿ ಕುಡಿಯುತ್ತಾನೆ. ಗುಲ್ಲಿಗೂ ಏರು ಯೌವನದ ಬಯಕೆ. ರಾಘು ಮನೆಗೆ ಬರುವುದೇ ಅಪರೂಪ. ಹಾಗೆ ಗುಲ್ಲಿಗೂ ಭಟ್ರ ಬಯಕೆ ತಪ್ಪಾಗಿ ಕಾಣಲಿಲ್ಲ.ಆವತ್ತು ಸಾಯಂಕಾಲವೇ ದೇವಾಲಯದ ಅಡುಗೆ ಕೋಣೆಯಲ್ಲಿ ಸುರುವಾಯಿತು ಭಟ್ರ ಪ್ರೇಮಪಾಠ. ಅದರ ಫಲವೇ ಸೇಖರ. ಬೆಳ್ಳಗೆ ಮುದ್ದಾಗಿದ್ದ ಮಗು ಕೇರಿಯಲ್ಲಿ ಎಲ್ಲರಿಗೂ ಅಚ್ಚುಮೆಚ್ಚು.
ಇತ್ತೀಚೆಗೇಕೊ ಭಟ್ರಿಗೆ ಗುಲ್ಲಿಯ ಮೇಲೆ ಅನುಮಾನ. ನಿನ್ನೆ ಹೇಳುತ್ತಿದ್ದಳು ಸೇಕರ ನಿಮ್ಮ ಹಾಗೇ ನಗುತ್ತಾನೆ ಎಂದು. ಎಲ್ಲಾದರು ಇವಳು ಬಾಯಿ ಬಿಟ್ಟರೆ ಮರ್ಯಾದೆ ಹರಾಜಾಗುತ್ತದೆ. ಜಾತಿಯಿಂದ ಬಹಿಷ್ಕಾರವಾಗಬಹುದು. ಆದರೆ ಕತ್ತಲಾಗುತ್ತಿದ್ದಂತೆ ಮನವೆಂಬ ಮರ್ಕಟ ಸುಖ ಅರಸಿಕೊಂಡು ಹೋಗಲೇ ಬೇಕೆಂದು ಒತ್ತಾಯಿಸುತ್ತದೆ. ಈಗೀಗ ಭಟ್ರು ಗುಲ್ಲಿಯ ಮೇಲೆ ಸ್ವಲ್ಪ ರೇಗುತ್ತಾರೆ. ಒಂದೆರಡು ಸಲ ಗುಲ್ಲಿ ಇಲ್ಲ ಒಡೆಯ ನಿಮಗೆಂದಿಗೂ ಮೋಸ ಮಡುವುದಿಲ್ಲ ಎಂದು ಅತ್ತದ್ದೂ ಇದೆ. ಆದರೂ ಭಟ್ರಿಗೆ ಸುಖ ನಿದ್ದೆ ಇಲ್ಲ ಹೆದರಿಕೆಯಲ್ಲಿ.
ರಮೇಶ ಪಿ.ಯು.ಸಿ ಕಲಿತು ಪಟ್ತಣದಲ್ಲಿ ಕೆಲಸಕ್ಕಿದ್ದಾನೆ. ಅವನಿಗೆ ತನ್ನ ಜಾತಿಯವರಿಗೆ ದೇವಾಲಯಕ್ಕೆ ಪ್ರವೇಶ ಕೊಡಿಸ ಬೇಕೆಂಬ ಹಂಬಲ. ಪಡ್ಡೆ ಹುಡುಗರ ಸಹಕಾರ ಬೇರೆ ಇದೆ. ಒಂದೂ ದಿನ ಬೆಳಿಗ್ಗೆ ಗುಂಪು ದೇವಾಲಯಕ್ಕೆ ಬ೦ದೇ ಬಿಡುತ್ತದೆ. ದಯವಿಟ್ಟು ದೇವಾಲಯದ ಒಳಗೆ ಬರಬೇಡಿ ಅಪವಿತ್ರವಾಗಿ ಊರಿಗೆ ಒಳ್ಳೆಯದಾಗಲಿಕ್ಕಿಲ್ಲ ಎಂದು ವಿನಂತಿ ಮಾಡಲು ಪ್ರಾರಂಭಿಸುತ್ತಾರೆ ನಮ್ಮ ಭಟ್ರು. ನೀವು ಗುಲ್ಲಿಯನ್ನು ಮುಟ್ಟಿದರೆ ಅಪವಿತ್ರವಾಗುವುದಿಲ್ಲವೋ ಎಂದು ಅಬ್ಬರಿಸುತ್ತಾನೆ ರಮೇಶ. ಅಲ್ಲಿಗೆ ಭಟ್ರ ದ್ವನಿ ಉಡುಗಲು ಪ್ರಾರಂಭಿಸುತ್ತದೆ. ನನಗೂ ಗುಲ್ಲಿಗೂ ಯಾವ ಸಂಬಧವೂ ಇಲ್ಲ ಎಂದ ಕ್ಷೀಣ ದ್ವನಿಯಲ್ಲಿ ಉಸುರುತ್ತರೆ. ಗುಲ್ಲಿ ನೀನೆ ಹೇಳೆ ಈ ಬಿಳಿ ಮಗು ಯಾರದ್ದೆಂದು ಎಂದು ರಮೇಶ ನುಡಿದಾಗ ಭಟ್ರಿಗೆ ಭೂಮಿಯೇ ಬಾಯಿ ತೆರೆದು ತನ್ನನ್ನು ನುಂಗ ಬಾರದೆ ಎಂದೆನಿಸುತ್ತದೆ.
ಏ ರಮೇಶ ಯಾಕೋ ಬಾಯಿಗೆ ಬಂದ ಹಾಗೆ ಮಾತಾಡ್ತೀಯ.ನಮ್ಮ ರಾಜ ಮೇಷ್ಟ್ರು ಹೇಳಿದ್ದಾರೆ ಕರ್ರಗಿರುವವರಿಗೂ ಬೆಳ್ಳಗಿನ ಮಕ್ಕಳು ಹುಟ್ಟ ಬಹುದೆಂದು. ಏನೋ ತುಂಬಾ ಸಾಲೆಗೆ ಹೋಗಿದ್ಯಂತೆ, ನಿಂಗೆ ಗೊತ್ತಿಲ್ವಾ ಎಂದು ಗುಲ್ಲಿ ನುಡಿದಾಗ, ಭಟ್ರಿಗೆ ಗುಲ್ಲೆ ಮಾನಸಿಕವಾಗಿ ತನಗಿಂತ ತುಂಬಾ ಎತ್ತರದಲ್ಲಿದ್ದಾಳೆನಿಸಿತು.
No comments:
Post a Comment