ಮಾತು ಸಾಕಾದಾಗ ಮೌನವೇ ಸಂಗಾತಿಯಾದಾಗ
ಮನಸ್ಸು ಮಂಕಾದಾಗ ಚಿಲಿಪಿಲಿ ದನಿಗಳು ಕೇಳದಾದಾಗ
ಜೊತೆಗೆ ನೀನಿರಬೇಕಿತ್ತು ಗೆಳತಿ
ಹೃದಯ ಏಕಾಂತ ಸಾಕೆಂದು ಚೀರಿದಾಗ
ಆತ್ಮ ಸಂಗಾತಿ ಬೇಕೆಂದು ಬಗೆ ಬಗೆಯಾಗಿ ಕೇಳಿದಾಗ
ಜೊತೆಗೆ ನೀನಿರಬೇಕಿತ್ತು ಗೆಳತಿ
ಭಯಾನಕ ಕನಸುಗಳೇ ರಾತ್ರಿ ಸಖರಾದಾಗ
ನೀರವ ಏಕಾಂತ ನೆಮ್ಮದಿಯನ್ನು ಕಿತ್ತು ತಿನ್ನುವಾಗ
ಜೊತೆಗೆ ನೀನಿರಬೇಕಿತ್ತು ಗೆಳತಿ
ಹುಣ್ಣಿಮೆ ಚಂದ್ರ ಬಿರು ಬಿಸಿಲಾಗಿ ಸುಡುವಾಗ
ಹೊಳೆಯುವ ನಕ್ಷತ್ರಗಳು ಕಣ್ಣನ್ನು ಚೂರಿಯಾಗಿ ಚುಚ್ಚಿದಾಗ
ಜೊತೆಗೆ ನೀನಿರಬೇಕಿತ್ತು ಗೆಳತಿ
ಸುರಿಯುವ ಮಂಜು ಕೆಂಡವಾದಾಗ
ನಡೆಯುವ ಹೆಜ್ಜೆ ಜೋಲಿ ತಪ್ಪಿ ಬಿದ್ದಾಗ
ಜೊತೆಗೆ ನೀನಿರಬೇಕಿತ್ತು ಗೆಳತಿ
ಸುಂದರ ಮುಂಜಾವು ಮನಸ್ಸಲ್ಲಿ ಭಾವನೆ ಅರಳಿಸದಾಗ
ತಂಪಾದ ಸಂಜೆ ದೇಹದಲ್ಲಿ ಕಾಮನೆ ಕೆರಳಿಸದಾಗ
ಜೊತೆಗೆ ನೀನಿರಬೇಕಿತ್ತು ಗೆಳತಿ
ಕಣ್ಣೀರು ಕೋಡಿಯಾಗಿ ಹರಿದು ಗಂಟಲೊತ್ತಿ ಬಂದಾಗ
ಉಕ್ಕಿ ಬರುವ ದುಃಖದಿಂದ ಬಾಗಿಲಿ ಚಿಲಕ ಹಾಕಿದಾಗ
ಜೊತೆಗೆ ನೀನಿರಬೇಕಿತ್ತು ಗೆಳತಿ
ಮನೆ ಮನೆಗಳಲ್ಲಿ ದೀಪ ಬೆಳಗಿ ಸಂಭ್ರಮದಲ್ಲಿದ್ದಾಗ
ನನ್ನ ಮನದಲ್ಲಿ ಕಾರ್ಗತ್ತಲೆ ತುಂಬಿದ್ದಾಗ
ಜೊತೆಗೆ ನೀನಿರಬೇಕಿತ್ತು ಗೆಳತಿ
ಸುತ್ತ ಮುತ್ತ ತಂಪಾದ ವಾತಾವರಣವಿದ್ದಾಗ
ನನ್ನೊಳಗಿನ ಸುಡುವ ಬೆಂಕಿ ನೆಮ್ಮದಿ ಕಿತ್ತು ಕೊಂಡಾಗ
ಜೊತೆಗೆ ನೀನಿರಬೇಕಿತ್ತು ಗೆಳತಿ
ನಡುರಾತ್ರಿಯಲ್ಲಿ ಕಿಟಕಿಯ ಪಕ್ಕ ನೆರಳು ಸರಿದಂತಾಗಿ
ಬಾಗಿಲ ಮೇಲೆ ಕುಟ್ಟಿದ ಸದ್ದಿನ ಭ್ರಮೆಯಿಂದ ಮೈ ಬೆವತಾಗ
ಜೊತೆಗೆ ನೀನಿರಬೇಕಿತ್ತು ಗೆಳತಿ
ಕಣ್ಣಿಗೆ ಎಣ್ಣೆ ಬಿಟ್ಟಂತೆ ನಿದ್ದೆ ದೂರವಾಗಿದ್ದಾಗ
ಕ್ಷಣವೊಂದು ಯುಗವಾಗಿ ಕಳೆಯುತ್ತಿದ್ದಾಗ ಜೋಗುಳ ಹಾಡಲು
ಜೊತೆಗೆ ನೀನಿರಬೇಕಿತ್ತು ಗೆಳತಿ
ಭಾವಗಳನ್ನು ಹಾಡಾಗಿ ಹೊಮ್ಮಿಸ ಬೇಕೆಂದಿದ್ದಾಗ
ಎದೆಯ ನೋವು ಹಗುರಾಗ ಬೇಕಾದಾಗ ದನಿಗೆ ದನಿ ಸೇರಿಸಲು
ಜೊತೆಗೆ ನೀನಿರಬೇಕಿತ್ತು ಗೆಳತಿ
ಕೊರೆಯುವ ಚಳಿ ಮೈ ಮೂಳೆ ಕತ್ತರಿಸುತ್ತಿದ್ದಾಗ
ಸುರಿಯುವ ಮಳೆ ನಡುಗಿಸುತ್ತಿದ್ದಾಗ ಬೆಚ್ಚಗೆ ತಬ್ಬಿ ಕೊಳ್ಳಲು
ಜೊತೆಗೆ ನೀನಿರಬೇಕಿತ್ತು ಗೆಳತಿ
ಕೈಗೆ ಕೈ ಸೇರಿಸಿ ಜೊತೆಯಾಗಿ ನಡೆಯ ಬೇಕೆನಿಸಿದಾಗ
ತೀರದಂಚಿನಲ್ಲಿ ಕುಳಿತು ಹಾಯಿ ದೋಣಿ ನೋಡ ಬೇಕೆನಿಸಿದಾಗ
ಜೊತೆಗೆ ನೀನಿರಬೇಕಿತ್ತು ಗೆಳತಿ
ಜಗತ್ತೇ ಶೂನ್ಯವಾಗಿ ಮನ ರೋಧಿಸುತ್ತಿದ್ದಾಗ
ನಿನ್ನ ಕಾಲದಿಂಬಿನ ಮೇಲೆ ಮಲಗಿ ಶಾಂತಿಯನ್ನರಸಲು
ಜೊತೆಗೆ ನೀನಿರಬೇಕಿತ್ತು ಗೆಳತಿ
6 comments:
ಸಾರ್ ಖಂಡಿತ ನಿಮ್ಮ ಕವನ ಅದ್ಭುತವಾಗಿದೆ. ಒಂದೇ ಉಸಿರಿಗೆ ಓದಿಸಿಕೊಂಡು ಹೋಯಿತು.ಇದನ್ನು ಓದಿ ಮನಸ್ಸು ಡಿಸ್ಟರ್ಬ್ ಆಗಿದ್ದಂತೂ ಸತ್ಯ.
ನನ್ನ ಲೇಖನಕ್ಕೆ ತಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು.
ವಿ.ಎಂ.ಶ್ರೀನಿವಾಸ (ವಿಸ್ಮಯ ನಗರಿಯ ಬರಹಗಾರ)
http://vismayanagari.com/node/3314#comments
'ಶೂನ್ಯತೆ' ಕಾಡಿದಾಗಲೆಲ್ಲಾ .."ಜೊತೆಗೆ ನೀನಿರಬೇಕಿತ್ತು ಗೆಳತಿ"..ಹೌದು, ಒಳ್ಳೆ ಕವನ. ನಿರೂಪಣೆಯೂ ಅಷ್ಟೇ ಚೆನ್ನಾಗಿದೆ..
-ಚಿತ್ರಾ
"ಜಗತ್ತೇ ಶೂನ್ಯವಾಗಿ ಮನ ರೋಧಿಸುತ್ತಿದ್ದಾಗ
ನಿನ್ನ ಕಾಲದಿಂಬಿನ ಮೇಲೆ ಮಲಗಿ ಶಾಂತಿಯನ್ನರಸಲು
ಜೊತೆಗೆ ನೀನಿರಬೇಕಿತ್ತು ಗೆಳತಿ"
bahala chennagi barediddira , neevu nimma bhavanegala jothe aata vaadidante kanuttade.. e melina vakyave addakke saakshi.., nimma baravanigeyalli pritiya novide.. nimma manassina maathannu horabidalaagade chada padisutira .. atiyayitenu.. tappiddare ..kshamisi ..
tumbaa chennagide..
ಧನ್ಯವಾದಗಳು ರಿಯಾಜ್.
ಕನಸುಗಳೆಲ್ಲಾ ನನಸಾದರೆ ಭಾವನಾ ಪ್ರಪಂಚಕ್ಕೂ ವಾಸ್ತವಕ್ಕೂ ಆಗುವ ತಾಕಲಾಟದಲ್ಲಿ ಮನುಷ್ಯ ನೆಮ್ಮದಿಯಾಗಿರಲಾರ.
tumba chennagide prashanth
Post a Comment