ಮುಸ್ಸಂಜೆಯ ತಂಗಾಳಿ ಸುಮಗಂಧ ಪಸರಿಸಿರೆ
ನದೀ ತೀರದಿ ನೀ ನನ್ನ ಬೆನ್ನಿಗಾತು ಕುಳಿತಿರೆ
ಇಳಿದಿತ್ತು ನಾಕವೇ ಭುವಿಗೆ ಮರೆಸಿತ್ತು ಇಲ್ಲಿನ ನರಕ
ಗೋವುಗಳ ಮಂದೆ ಊರಿನೆಡೆ ಸಾಗುತಿರೆ
ಕೊರಳ ಗೆಜ್ಜೆಯ ನಿನಾದ ಕಿವಿಯಲ್ಲಿ ಹಾಡುತಿರೆ
ನಿನ್ನ ಇನಿದನಿಯ ಮಾತು ಸುಮಧುರ ಸಂಗೀತ
ಹಕ್ಕಿಗಳ ಇಂಚರವೇ ಅದಕೆ ತಾಳ ಮೇಳ
ಪಡುವಣದಿ ಸೂರ್ಯ ಆಗಸದಿ ಕೆಂಪು ಹರಡಿರೆ
ನಿನ್ನ ಮೊಗದ ಕೆಂಪು ಅದರೊಡನೆ ಮಿಳಿತವಾಗಿರೆ
ಆವರಿಸುತ್ತಿದ್ದ ಕತ್ತಲಿಗೆ ನಿನ್ನ ಕಣ್ಣು ಮಿನುಗುತಿರೆ
ನನ್ನ ನಾನೇ ಮರೆತು ನಿನ್ನೊಳಗೆ ಸೇರಿದ್ದೆ
No comments:
Post a Comment